Saturday, August 25, 2012

ಈ ಹುಡುಗನ ಪ್ರೀತಿ ಕಾಣದಿರೋ ಹುಡುಗಿ ನೀ ಪಾಪಿ ಕಣೇ

ಒಲವ ಒದ್ದು ಎದ್ದು ಹೋದೆಯಲ್ಲೇ ನೀನು,
ನೀ ಹೋದ ಮೇಲೆ ಅಲ್ಲವೇ ಬದುಕು ಸವಿಜೇನು. ||
ಹೃದಯವೇ ಅವಳಿಗಾಗಿ ಮಿಡಿದೆ,  ಅವಳಿಲ್ಲದೆಯು ಬದುಕಲ್ಲಿ ಸುಖವಿದೆ. (ಒಲವ ಒದ್ದು )

 

ಜೀವನವೆಲ್ಲ..... ಅವಳನ್ನೇ, ಪ್ರೀತಿಸಲೆಂದು  ಬಂದೆ ನಾನು.
 ಜೀವನದಲೆಂದು ನನ್ನನ್ನ, ಪ್ರೀತಿಸದ ವಂಚಕಿ ನೀನು.
ನೀನಿಲ್ಲದೆಯು  ಬದುಕು ಇಷ್ಟ,  ಹೇಳೇ ಇದು ಯಾರಿಗೆ ನಷ್ಟ
ನಿನಗಿಂತ  ಸುಂದರ ಜಗವು (ಒಲವ ಒದ್ದು )

ನನ್ನ ಬಯಸಿ ಮುಂದೆಂದೋ, ನಿನ್ನ ಬದುಕು ಕೊರಗುವುದು.
ನಿನ್ನೀ ಪ್ರೀತಿಯ ಹುಸಿಯಂತೆ, ನನ್ನ ಮನಸು ಕರಗುವುದು.
ಪ್ರೀತಿ ಇದ ಗುರುತಿಸದ ಹುಡುಗಿ ನೀ ಪಾಪಿ ಕಣೆ
ನಿನ್ನೆಗಿಂತ  ಹೆಚ್ಚಿದೆ ನನ್ನ ನಗುವು (ಒಲವ ಒದ್ದು )

(ಒಲವಿನ ಉಡುಗೊರೆ ಕೊಡಲೇನು ಹಾಡಿನ  ರಾಗಕ್ಕೆ ಬದಲಾದ  ಸಾಹಿತ್ಯ)

Sunday, July 22, 2012

ನೀ ಬಿಟ್ಟು ಹೋದ ಬದುಕಿಗೆ ಇಟ್ಟ ಹೆಸರು ಸುಧೀರ್ಘ ಆತ್ಮಹತ್ಯ,

ನೀ ಬಿಟ್ಟು ಹೋದ ಬದುಕಿಗೆ ಇಟ್ಟ ಹೆಸರು ಸುಧೀರ್ಘ ಆತ್ಮಹತ್ಯ,
ನಾ ಕಟ್ಟಿಕೊಂಡ ಒಲವಿಗೆ ಸಾವೇಇಲ್ಲ ಬದುಕಲು ಮತ್ತೆ,ಮತ್ತೆ.......

ಸುಡುಗಾಡ ಬೂದಿಯದು  ಸುಳಿಯುತ್ತಿದೆ ಬೇಡವೆಂದರೂ ಸುಳಿಯಂತೆ,
ಮರುಭೂಮಿಯಿದು ಮರು-ಭೂಮಿಯಾಗುವ ಕನಸಿಗೆ ನೀ  ಮಳೆಯಂತೆ.

ಆಕಾಶದಗಲಕ್ಕು ಅವಕಾಶಗಳಿವೆ  ಎಲ್ಲಾದರು ಇಳಿದುಬಿಡು ಮಂತ್ರಜಲವೇ,
ಅಲ್ಪಯುವಾಗಲೋಲ್ಲದ ಅನುರಾಗಿಯ ಕೊರಗಲ್ಲವಿದು, ಆಮಂತ್ರಣ ಒಲವೆ.

ಬಾ ... ಬಂದಾದ ಮೇಲೆ ಮರೆತು ಬಿಡು ನೀ ಹಿಂದಿರುಗುವ  ದಾರಿಯ
ಬಯಕೆಯಲ್ಲ ಭಯವಿದು, ಕರುಣೆತೋರಿ ಕರುಣಿಸದಿರಲೆಂದು ಈ ಪರಿಯ

Friday, July 20, 2012

ಅರೆಗಳಿಗೆಯಾದರು ಬಂದು ಹೋಗಿದ್ದರು ನನಗದು ಮುಗಿಯದ ಬುತ್ತಿ,

ನೀ ಬಿಟ್ಟು ಹೋಗುವ  ನೆನಪುಗಳು ಕತ್ತಲನೆ ಉಳಿಸಿ ಬೆಳಗಬೇಕು ಸೊಡರಾಗಿ,
ಜೊತೆ ಇಟ್ಟು ಬರುವ  ಹೆಜ್ಜೆಗಳು ಕೊನೆಯವರೆಗೂ ಕಾಲ, ಕಾಡಬೇಕು ತೊಡರಾಗಿ.

ಪ್ರತಿ ಬಾರಿಯೂ ವಿಧಾಯವ ಹೇಳುವ ನಿನ್ನ ಕಣ್ಣುಗಳು ನಿರ್ದಯವಾಗಿ ನನ್ನ ಅನುದಿನವು ಕೊಲ್ಲಬೇಕು,
 "ಮೊದಲು ಹುಟ್ಟಿದ್ದು ನಿನ್ನ ಪ್ರೀತಿ ನಂತರ ನಾನು" ಅನ್ನಬಹುದಾದ  ಅಸಂಬದ್ದ ಹೇಳಿಕೆಯೊಂದು ಇನ್ನ  ಅಜೀವವಾಗಿ  ನಿಲ್ಲಬೇಕು.

ವಶಕಿಟ್ಟುಕೊಳ್ಳುವ  ನಿನ್ನ ನೆನಪುಗಳ ಒಳಗೆ ನಾ ನರಳಬೇಕಿತ್ತು,
ವಿಷವಿಕ್ಕದೆ ಕೊಲ್ಲುವ ಕಣ್ಣ ಹೊಳಪುಗಳಿಗೆ ಸಿಲುಕಿ ಮರಳಿದರೆ ಸಾಕಿತ್ತು.

ಕೆಲವು ದಿನವಾದರೂ ಮನದ ಕೋಣೆಯ ಬಾಡಿಗೆಗೆ ಹಿಡಿದು ನೀ ಉಳಿಯಬೇಕಿತ್ತು,
ಒಲವು ಕ್ಷಣವಾದರೂ ಅಂಗಳದಲ್ಲಿ ಅರಳಿ ಬಾಡದ ಹಾಗೆ ಮುಡಿದು ನಲಿಯಬೇಕಿತ್ತು.
ಅರೆಗಳಿಗೆಯಾದರು   ಬಂದು ಹೋಗಿದ್ದರು ನನಗದು ಮುಗಿಯದ ಬುತ್ತಿ,
ಮರಗುಳಿಯೇ ಆದರು ನೀನ್ನಲ್ಲಿಯೇ ಸೇರುತ್ತಿದ್ದೆ ಎಲ್ಲಾದರೂ ಸುತ್ತಿ.

Friday, July 6, 2012

ಅನಿವಾರ್ಯವಲ್ಲದ ಕ್ಷಮೆಗೆ ಅರ್ಹನಾದವನು

ಒಂದು ನೀನು ಇನ್ನೊಂದು ಹಣ ಈ ಎರಡೇ ಎರಡು ಅಪರಿಪೂರ್ಣತೆಗಳು ನನ್ನನ್ನು ಇಷ್ಟು ತಡವಾಗಿ ಈ ಪರಿ ಕಾಡದೆ ಇದ್ದಿದ್ದರೆ ಬಹುಶ ಈ ಬರಹ ಬರೆಯುವ  ಅವಶ್ಯಕತೆಯೇ ಇರುತ್ತಿರಲಿಲ್ಲ ಹುಡುಗಿ! ಇಷ್ಟಕ್ಕೂ ನಿನ್ನಿಂದ ಹಣವಾಗಲಿ ಅಥವಾ ಹಣದಿಂದ ನೀನಾಗಲಿ ಸಿಗುವುದಕಿಂತ ದೊಡ್ಡ ದುರಂತ  ಮತ್ತೇವುದಿದೆ ಹೇಳು? ಈ ಬದುಕಿಗೆ ನಿನ್ನ ನೀರಿಕ್ಷೆ ಇದೆಯೋ ಹೊರತು ನಿನ್ನಿಂದ (ಮನಸಿಗೆ ವಿರುದ್ದವಾಗಿ) ಯಾವುದೇ ನಿರೀಕ್ಷೆಗಳಿಲ್ಲ
ಇದುವರೆಗಿನ ಈ ಬದುಕು ನಿನ್ನ ಅಪರಿಚಿತವಾಗಿರಿಸಿದೆ ಅನ್ನುವುದೊಂದೇ ನನಗೆ ಬಹು ದೊಡ್ಡ ಸಮಾದಾನ ಏಕೆಂದರೆ ಪರಿಚಿತಗೊಂಡ ಕೆಲವೇ ಕೆಲವರಲ್ಲಿ ನಿನಗಾಗಿ ಎತ್ತಿಟ್ಟುಕೊಳ್ಳಬಹುದಾದ  ಮೌಲ್ಯಗಳಿದ್ದವೆ ಹೊರತು ಸಂಪೂರ್ಣ ನೀನಿರಲಿಲ್ಲ ಇಷ್ಟಕ್ಕೂ ನನ್ನ ಪಾಲಿಗೆ ನೀನೆಂದರೆ: ಸದ್ದಿಲ್ಲದೇ ಹರಿಯುವ ನದಿ, ಸಹನೆಯಲಿ ಕಾದು ಕುಳಿತ ನಿಧಿ, ಏಕಾಂತದಲಿ ಸುರಿಯುವ ಮಳೆ, ಸೋಲುಗಳಿಗೆ ದೃತಿಗೆಡದ ನಾಳೆ,  ಸಾಮಿಪ್ಯಕ್ಕೆ ಶ್ರುತಿಗೊಳ್ಳಬೇಕಾದ ವೀಣೆ, ಅಸಹಾಯಕತೆಗೆ ಅತಿಯಾದ ಕರುಣೆ, ನಿನ್ನದು ಮಂತ್ರ ಒಲಿದ ಕಣ್ಣು,  ಮನಸು ಮಾಗಿದ ಹಣ್ಣು,  ಮುಗುಳುನಗು ನಿನ್ನ ಒಡವೆ, ಗುಳಿಕೆನ್ನೆ ಸಾಗರದ ದಡವೇ!
ಇದೆಲ್ಲವ ಹೊರತುಪಡಿಸಿಯು  ನನಗೆ ನೆನಪಾಗುವುದು ಏನೆಂದರೆ ಗೆಳೆಯರೊಂದಿಗೆ ಹೋಗಿದ್ದ ಜಾತ್ರ್ರೆಗಳಲ್ಲಿ  ಅವರು ಸಿಕ್ಕ ಸಿಕ್ಕ ಹುಡುಗಿಯರ ಮುದ್ದನೆಯ ಅಲಂಕಾರಕ್ಕೆ, ಮದ್ದಾನೆಯ ಅಹಂಕಾರಕ್ಕೆ ಮನಸೋತು ತಿರುಗುತಿದ್ದರೆ ಮೆರವಣಿಗೆ ಹೊರಟಿರುವುದು  ದೇವರ ಉತ್ಸವ ಮೂರ್ತಿಯ ಅಥವಾ ಈ ಹುಡುಗಿಯರ ಉತ್ಸಾಹ ಮಾತ್ರವ ಎಂದು ಅನಿಸತೊಡಗಿದ್ದದ್ದು  ಅದೇನೇ ಇದ್ದರು  ನೀ ಎಂದಿಗೂ ಮೆರವಣಿಗೆ ಹೊರಡುವುದಿಲ್ಲ ನಿನ್ನಲ್ಲಿ ಅಲಂಕಾರ, ಆತ್ಮೀಯತೆ, ಆಕರ್ಷಣೆಗಳೆಲ್ಲ  ದೇಹಕಿಂತ ಮನಸಿಗೆ ಹತ್ತಿರವಾಗಿವೆ ಎಂದು ನನಗೆ ಗೊತ್ತು

ಕಾಲಿಟ್ಟಲೆಲ್ಲ ಒಲವಿನ ಹೊರತೆಗಳು, ಕೈ ಚಾಚಿದ್ದಾರೆ ಸಿಗುತಿದ್ದ ಅವಕಾಶಗಳು ಕಣ್ನ್ ಬೆರೆಸಿದ್ದರೆ ಕರಗುತಿದ್ದ ಮನಸುಗಳು ಕ್ಷಣ ಕ್ಷಣವೂ ನನ್ನನ್ನು ಗಟ್ಟಿಗೊಳಿಸಿ ಬಿಟ್ಟಿವೆ ಬೀದಿ ಬದಿಯ ವ್ಯಾಪಾರದ ಸರಕಿಗಿಂತ ಸಲೀಸಾಗಿ ಸಿಗುತ್ತಿರುವ ಪ್ರೇಮ ಸಾಮಿಪ್ಯವು ಕೂಡ ನಿನ್ನಂತೆ ಸಪ್ಪೆ ಅನಿಸುತ್ತಿದೆ ಎಂದು ಬರೆದುಕೊಳ್ಳುವಷ್ಟು  ಸ್ಪುರದ್ರೂಪಿ ನಾನಲ್ಲ.  ನನ್ನದು ಸಾಮಾನ್ಯ ಹೆಸರು, ಸಾದಾರಣ ರೂಪು, ಸರಳ ಜೀವನ, ತೀರ ಸಪ್ಪೆ ಅನಿಸುವ ಭಾವನೆ, ಸಹನೆ ಎಂದು ಕರೆಸಿಕೊಳ್ಳುವ ಸೋಮಾರಿತನ ಅನ್ನುವುದೆಲ್ಲ ಎಷ್ಟು ಸತ್ಯವೋ,  ಇವ್ಯಾವುಗಳಿಗು ನಿನ್ನ ಬರ ಸೆಳೆಯುವ ತಾಕತ್ತಿಲ್ಲ ಅನ್ನುವುದು ಅಷ್ಟೇ ಸತ್ಯ. ಆದರೆ ಈ ಚಿಕ್ಕ ಜೀವನಾವದಿಯಲ್ಲಿ ನಿನ್ನೊಂದಿಗೆ ಸಾಗಬೇಕಾದ ಪ್ರಯಾಣ ಸುದೀರ್ಘವಾಗಿದೆ ಗೆಳತಿ. ಇದುವರೆಗೆ ನಡೆದ ಹಾದಿಯಲೆಲ್ಲು ತೆರೆದ ಬಾಗಿಲ ಮುಂದೆ ನಿಂತವನಲ್ಲ ಮುಚ್ಚಿದ ಬಾಗಿಲ ತಟ್ಟಿಯೂ ಇಲ್ಲ. ಹಾಗಂದ ಮಾತ್ರಕ್ಕೆ  ಅಮಾಯಕತೆಯು ನನಗಿಲ್ಲ,  ಮಾಡಿದ ಅಡಿಗೆಯ ರುಚಿ ತಿಳಿಯಲು ತಿನ್ನಲೆಬೇಕೆಂದೆನಿಲ್ಲವಲ್ಲ  ಬಳಸಿದ ಪದಾರ್ಥ, ಬೆರೆಸಿದ ಪ್ರಮಾಣ, ಬೇಯಿಸಿದ ಪರಿ ಇವಿಷ್ಟೇ ಸಾಕು ಸಾಮಾನ್ಯ ಜ್ಞಾನಕ್ಕೆ.
ಆಕಸ್ಮಿಕವಾಗಿ ಈ ಬರಹವದು  ನಿಮ್ಮ  ಮುಟ್ಟಿದ್ದರೆ, ಅನವಶ್ಯಕವಾಗಿ  ನಿಮ್ಮ  ಮನವ ತಟ್ಟಿದ್ದರೆ, ಅಪ್ರಯೋಜಕ ಹುಚ್ಚುತನದೊಳಗೆ ನಿಮ್ಮ  ಹಿಡಿದಿಟ್ಟಿದ್ದರೆ,  ಅದಕ್ಕಾಗಿ  ಕ್ಷಮೆ ಇರಲಿ

                                              ಅನಿವಾರ್ಯವಲ್ಲದ ಕ್ಷಮೆಗೆ  ಅರ್ಹನಾದವನು

Thursday, July 5, 2012

ನೀ ಹುಟ್ಟಿದಾಗ ಆಕೆಗೆ ನೀ ಮಗು ನೀ ಬೆಳೆದಾಗ ಆಕೆ ನಿನ್ನ ಮಗು,

ಅಗಲದಂತೆ ಹಚ್ಚಿಕೊಂಡ ಮೊದಲ ಹೆಗಲು,
ಆರುವ ಹಣತೆಯಲ್ಲ ಆಕೆ ಶಾಶ್ವತ ಹಗಲು
ಅರಿವಿಗಾಗಿ ಕಲಿತಿದ್ದೆಲ್ಲ ಆಕೆಯದೇ ಅನುಕರಣೆ,
ಅವಳಿಗೆ ಮತ್ತೊಂದು ಹೆಸರು ಇದೆ ಅದು ಕರುಣೆ
ಅದೆಷ್ಟೋ ಅಸ್ತಿತ್ವಗಳಿಗೆ ಆಕೆಯ ಹೆಸರಿನದೆ ಗುರುತು,
ಅದೇನೇ ಸಿಕ್ಕರು ಬದುಕಲಾರಳು ನಿನ್ನ ಅಶ್ರಯವ ಮರೆತು
ಅಮೃತವು ಕೂಡ ನಿಷ್ಪ್ರಯೋಜಕ ಆಕೆ ಇಲ್ಲದ ಮೇಲೆ,
ಅರೆ ಗಳಿಗೆ ಇದ್ದರು ಹುಟ್ಟು ಎಂಬುದು ಆಕೆಯದೇ ಲೀಲೆ
ಪ್ರತಿ ಕಣ್ಣುಗಳೋಳಗು ಮೂಡಿದ ಮೊದಲ ಚಿತ್ರ,
ಎಲ್ಲರ ಬದುಕಿನಲು ಅವಳದೆ ಮುಖ್ಯ ಪಾತ್ರ
ಸಾವಿನ ಅಂಚಿನಲಿ ನಡೆದು ಉಸಿರು ನೀಡಿದಳು ನಿನ್ನ ಹೆತ್ತು,
ಸಾವಿರ ಅಪಾಯಗಳ ನಡುವೆಯೂ ನಿನ್ನ ಉಳಿಸಿದ್ದು ಕೈ ತುತ್ತು
ನೀ ಹುಟ್ಟಿದಾಗ ಆಕೆಗೆ ನೀ ಮಗು ನೀ ಬೆಳೆದಾಗ ಆಕೆ ನಿನ್ನ ಮಗು,
ನಿನ್ನ ಗೆಳೆತನವೆ ಆಕೆಯ ಬೀಗು ಪ್ರತಿ ಗೆಲುವು ಅಕೆಯ ಮುಗುಳುನಗು.
(ಜಗತ್ತಿನಲಿ ಪ್ರತಿ ಜೀವಿಗೂ ಪರಿಶುದ್ದ ಪ್ರೀತಿಯನ್ನು ಪರಿಚಯಿಸುವುದೇ ತಾಯಿ, ನಿನ್ನ ದೇಹದಲ್ಲಿ ನಿಸ್ತೇಜಗೊಳ್ಳಬಹುದಾದ ಕಟ್ಟ ಕಡೆಯ ಜೀವಕೋಶದ ಮೇಲು ಆಕೆಯದೇ ಪ್ರದಾನ ಹಕ್ಕು.)

Wednesday, June 27, 2012

ನಿನ್ನ ಬರುವಿಕೆಗಾಗಿ ಕಾದಿರುವ ಹಾಗು ಕಾಯುತ್ತಿರುವ ಬದುಕು

ಎಂದಿಗೂ ನಿನ್ನ ಕೈ ಸೇರಿ ನಲಿಯದ, ನಲಿದರು ಬಾಯಿತುಂಬಿ ಉಲಿಯದ, ಉಲಿದರು ನನ್ನ ಅರ್ಥಯಿಸುವಲ್ಲಿ ಫಲಿಸದ, ಫಲಿಸಿದರು ಕೂಡಲೇ ನನ್ನೆಡೆಗೆ ಒಲಿಸದ, ಒಲಿಸಿದರು ಒಂದಾಗಿ ಬಾಳಲು ಕಲಿಸದ. ಇಂತ ನೂರಾರು ಬರಹಗಳ ಬರೆಯುವುದು ಅರ್ಥಹೀನ ಎಂದು ಬಲ್ಲೆ. ಆದರೇನು ಮಾಡಲಿ ಒಲವೆ ನಿನ್ನ ಅಪರಿಚಿತತೆ ನನ್ನ ಮೌನವಾಗಿಸಿದೆ, ಅಸ್ಪಷ್ಟತೆ ಅನುಮಾನಿಸುಸುತ್ತಿದೆ, ಅಗತ್ಯತೆ ಅನಿವಾರ್ಯವಾಗುತ್ತಿದೆ. ಇದೆಲ್ಲವ ಮಾರೆಮಾಚಿ ಮನಸ ಸಮಾಧಾನಿಸಲೆಂದೇ ಬರಹ. ಎಲ್ಲಿಯೋ ಹುಟ್ಟಿ  ಯಾರದೋ ಕಣ್ಗಾವಲಿನಲ್ಲಿ ಬೆಳೆಯುತ್ತಾ, ಮುಂದೆಂದೋ ಎದುರಾಗಲಿರುವ ನನ್ನ ಏಕೈಕ ನಿರೀಕ್ಷೆಯಲ್ಲಿ ಬದುಕಿಗೊಂದು ಆರಂಭವನ್ನೇ  ನೀಡದೆ ನಿಂತಿರುವ ನಿನ್ನನ್ನ ಅಪರಿಚಿತವಾಗಿಯೇ ಪರಿ ಅಚ್ಚಿಕೊಂಡಿರುವವನು ಇನ್ನು ಬದುಕು ಬಳಿ ಕರೆದಾಗ ಬಿಟ್ಟು  ಬಿಡುತ್ತೆನಾ ?

Saturday, June 9, 2012

ಕರದಲ್ಲಿ ಹಿಡಿದ ಕಪ್ಪು ವಜ್ರದ ಸೆಳೆತಕ್ಕೆ ಬೆರಗಾಗದವರೆರೋ ಬಸವ


ಕೊರಳಲಿ  ಧರಿಸಿದ ಲಿಂಗವ ಕರದಲಿ ಹಿಡಿದು  ಕುಳಿತಾಗ  ಕಣ್ಣ ಮುಂದೆ ದಿಟ್ಟಿಸಿ,

ಹಣೆಯಲಿ ಪ್ರತಿಸ್ಥಾಪವಾದ ಬಿಂಬವದು ಕಣ ಕಣಗಳಲ್ಲೂ  ಉನ್ಮಾದವ ಹುಟ್ಟಿಸಿ,

ಮನದಲೊಂದೆ ಧ್ಯಾನ, ಮರೆಯಲಾಗದ  ಜ್ಞಾನ ಬಂದಂತಾಯಿತು  ಶಿವನ ಮುಟ್ಟಿಸಿ

Wednesday, May 30, 2012

ವಿವಾಹವೆಂದರೆ

ಎರಡು ಮನೆಗಳು ಕಾಣುವ ಅಪರೂಪದ ಸಡಗರ,ಎರಡು ಮನಸುಗಳು ಅನುಭವಿಸುವ ನಿತ್ಯದ ಸಂತಸ,ಇಡೀ ಮಾನವ ಕುಲವೇ ಆಚರಿಸುವ ಹಬ್ಬದ ಸಂಭ್ರಮ

ಇಂಥ ಸಡಗರ, ಸಂತಸ, ಸಂಭ್ರಮಗಳನ್ನೆಲ್ಲ ಕೂಡಿಟ್ಟು ಬದುಕು ಕನಸು ಕಟ್ಟಿಕೊಳ್ಳಲು ಪಡೆಯುವ ವರವೇ ಮದುವೆ ನಿಮ್ಮ  ಎಲ್ಲಾ ಕನಸುಗಳಿಗೂ ಜೀವನೀಡಿ ನಿಮ್ಮ  ಜೀವನದುದ್ದಕ್ಕೂ ಕೈ ಹಿಡಿದು ನಡೆಸುವ  ಸಂಗಾತಿ ನಿಮ್ಮವರಾಗಲಿ ವಿವಾಹಮಹೋತ್ಸವದ ಶುಭಾಶಯಗಳು

Saturday, May 5, 2012

ಮದುವೆ ಎಂಬುದು ಬದುಕು ಕಂಡುಕೊಂಡ ಶಾಶ್ವತ ನೆರಳು,
ವಾರ್ಷಿಕೋತ್ಸವಗಳು ಇಲ್ಲಿ ಗಟ್ಟಿಗೊಂಡ ಪ್ರೀತಿಯ ಬಿಳಲು .
ಇಂತ ಅಸಂಖ್ಯಾತ ಬಿಳಲುಗಳ ಸುವಿಸ್ತಾರ ನೆರಳಾಗಲಿ ನಿಮ್ಮ  ಬದುಕು
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

Wednesday, April 25, 2012

ನಿಮ್ಮ ಭಾವಕೋಶಗಳ ಮುಂದೊಂದು ಮನವಿ


ನನ್ನ ನಡೆ ಎಂದಾದರೂ ನಿಮ್ಮಲ್ಲಿ ಮುಜುಗರ ತಂದಿದ್ದರೆ,
ಒಡನಾಟವೆನಾದರು ಬೇಸರಕ್ಕೆ ಕಾರಣವಾಗಿದ್ದರೆ,
ಮಾತ್ಯವುದೋ ನಿಮ್ಮ ಮೌನವಾಗಿಸಿದ್ದರೆ,
ಬದುಕಿದು ನಿಮ್ಮ ಭಾವನೆಗಳ ಅಸ್ತವ್ಯಸ್ತಗೊಳಿಸಿದ್ದರೆ,
ಅದಕ್ಕಾಗಿ ಕ್ಷಮೆ ಇರಲಿ..... ತಪ್ಪು ಮಾಡುವವರು ಮಾಡುತ್ತಾ  ಕಲಿಯುತ್ತ ದೊಡ್ಡವರಾದರೆ, ಅದ ಕ್ಷಮಿಸುತ್ತಾ  ತಿದ್ದುತ್ತಾ  ದೇವರಾಗುವವರು ನೀವಲ್ಲವೆ.....

Monday, April 16, 2012

ಜನುಮದಿನ

ಹುಟ್ಟು ಹಬ್ಬವೆಂದರೆ ಸೂರ್ಯನ ಸುತ್ತಿ ಬರುವ ಸಂಭ್ರಮ,
ಈ ಪಥದ ಪ್ರತಿ ಹೆಜ್ಜೆಯಲು ನಲುವಿರಲಿ,
ಎದುರಾಗುವ ಎಲ್ಲಾ ತಿರುವಿನಲು ಗೆಲುವಿರಲಿ,
ಹಗಲುರಾತ್ರಿಗಳ  ಆಚರಣೆಗಳಲೆಲ್ಲ   ಚೆಲುವಿರಲಿ,
ಬದುಕು ಪರಿಚಯಿಸಿಕೊಂಡ ಸಂಬಧಗಳಲೆಲ್ಲಾ  ಒಲವಿರಲಿ.
ಜನುಮದಿನದ ಶುಭಾಶಯಗಳು
                                                  ಹಿತೈಷಿ
 

Friday, April 13, 2012

'ಜಗತ್ತಿನ ಮತ್ತ್ಯಾವ ಜೀವದಿಂದಲೂ ಕೂಡ ನಿನ್ನನ್ನು ನನ್ನಷ್ಟು ಪ್ರೀತಿಸಲಾಗುವುದಿಲ್ಲ'








ಬದುಕೆಲ್ಲಾ ನಿನ್ನನ್ನೇ ಪ್ರೀತಿಸುವವನನ್ನ ನೀನು ಕಳೆದುಕೊಂಡೆ, ಬದುಕಲ್ಲಿ ಎಂದು ನನ್ನನ್ನ  ಪ್ರೀತಿಸದವಳ ನಾನು ಕಳೆದುಕೊಂಡೆ, ಇಲ್ಲಿ ಯಾರೆಷ್ಟು ಕಳೆದುಕೊಂಡರು ಅನ್ನುವುದಕ್ಕಿಂತ  'ಜಗತ್ತಿನ ಮತ್ತ್ಯಾವ ಜೀವದಿಂದಲೂ ಕೂಡ ನಿನ್ನನ್ನು ನನ್ನಷ್ಟು ಪ್ರೀತಿಸಲಾಗುವುದಿಲ್ಲ'  ಅನ್ನುವುದು ನನ್ನನ್ನು  ಹೆಚ್ಚು ನೋವಿಗೀಡುಮಾಡಿದೆ.