Friday, July 6, 2012

ಅನಿವಾರ್ಯವಲ್ಲದ ಕ್ಷಮೆಗೆ ಅರ್ಹನಾದವನು

ಒಂದು ನೀನು ಇನ್ನೊಂದು ಹಣ ಈ ಎರಡೇ ಎರಡು ಅಪರಿಪೂರ್ಣತೆಗಳು ನನ್ನನ್ನು ಇಷ್ಟು ತಡವಾಗಿ ಈ ಪರಿ ಕಾಡದೆ ಇದ್ದಿದ್ದರೆ ಬಹುಶ ಈ ಬರಹ ಬರೆಯುವ  ಅವಶ್ಯಕತೆಯೇ ಇರುತ್ತಿರಲಿಲ್ಲ ಹುಡುಗಿ! ಇಷ್ಟಕ್ಕೂ ನಿನ್ನಿಂದ ಹಣವಾಗಲಿ ಅಥವಾ ಹಣದಿಂದ ನೀನಾಗಲಿ ಸಿಗುವುದಕಿಂತ ದೊಡ್ಡ ದುರಂತ  ಮತ್ತೇವುದಿದೆ ಹೇಳು? ಈ ಬದುಕಿಗೆ ನಿನ್ನ ನೀರಿಕ್ಷೆ ಇದೆಯೋ ಹೊರತು ನಿನ್ನಿಂದ (ಮನಸಿಗೆ ವಿರುದ್ದವಾಗಿ) ಯಾವುದೇ ನಿರೀಕ್ಷೆಗಳಿಲ್ಲ
ಇದುವರೆಗಿನ ಈ ಬದುಕು ನಿನ್ನ ಅಪರಿಚಿತವಾಗಿರಿಸಿದೆ ಅನ್ನುವುದೊಂದೇ ನನಗೆ ಬಹು ದೊಡ್ಡ ಸಮಾದಾನ ಏಕೆಂದರೆ ಪರಿಚಿತಗೊಂಡ ಕೆಲವೇ ಕೆಲವರಲ್ಲಿ ನಿನಗಾಗಿ ಎತ್ತಿಟ್ಟುಕೊಳ್ಳಬಹುದಾದ  ಮೌಲ್ಯಗಳಿದ್ದವೆ ಹೊರತು ಸಂಪೂರ್ಣ ನೀನಿರಲಿಲ್ಲ ಇಷ್ಟಕ್ಕೂ ನನ್ನ ಪಾಲಿಗೆ ನೀನೆಂದರೆ: ಸದ್ದಿಲ್ಲದೇ ಹರಿಯುವ ನದಿ, ಸಹನೆಯಲಿ ಕಾದು ಕುಳಿತ ನಿಧಿ, ಏಕಾಂತದಲಿ ಸುರಿಯುವ ಮಳೆ, ಸೋಲುಗಳಿಗೆ ದೃತಿಗೆಡದ ನಾಳೆ,  ಸಾಮಿಪ್ಯಕ್ಕೆ ಶ್ರುತಿಗೊಳ್ಳಬೇಕಾದ ವೀಣೆ, ಅಸಹಾಯಕತೆಗೆ ಅತಿಯಾದ ಕರುಣೆ, ನಿನ್ನದು ಮಂತ್ರ ಒಲಿದ ಕಣ್ಣು,  ಮನಸು ಮಾಗಿದ ಹಣ್ಣು,  ಮುಗುಳುನಗು ನಿನ್ನ ಒಡವೆ, ಗುಳಿಕೆನ್ನೆ ಸಾಗರದ ದಡವೇ!
ಇದೆಲ್ಲವ ಹೊರತುಪಡಿಸಿಯು  ನನಗೆ ನೆನಪಾಗುವುದು ಏನೆಂದರೆ ಗೆಳೆಯರೊಂದಿಗೆ ಹೋಗಿದ್ದ ಜಾತ್ರ್ರೆಗಳಲ್ಲಿ  ಅವರು ಸಿಕ್ಕ ಸಿಕ್ಕ ಹುಡುಗಿಯರ ಮುದ್ದನೆಯ ಅಲಂಕಾರಕ್ಕೆ, ಮದ್ದಾನೆಯ ಅಹಂಕಾರಕ್ಕೆ ಮನಸೋತು ತಿರುಗುತಿದ್ದರೆ ಮೆರವಣಿಗೆ ಹೊರಟಿರುವುದು  ದೇವರ ಉತ್ಸವ ಮೂರ್ತಿಯ ಅಥವಾ ಈ ಹುಡುಗಿಯರ ಉತ್ಸಾಹ ಮಾತ್ರವ ಎಂದು ಅನಿಸತೊಡಗಿದ್ದದ್ದು  ಅದೇನೇ ಇದ್ದರು  ನೀ ಎಂದಿಗೂ ಮೆರವಣಿಗೆ ಹೊರಡುವುದಿಲ್ಲ ನಿನ್ನಲ್ಲಿ ಅಲಂಕಾರ, ಆತ್ಮೀಯತೆ, ಆಕರ್ಷಣೆಗಳೆಲ್ಲ  ದೇಹಕಿಂತ ಮನಸಿಗೆ ಹತ್ತಿರವಾಗಿವೆ ಎಂದು ನನಗೆ ಗೊತ್ತು

ಕಾಲಿಟ್ಟಲೆಲ್ಲ ಒಲವಿನ ಹೊರತೆಗಳು, ಕೈ ಚಾಚಿದ್ದಾರೆ ಸಿಗುತಿದ್ದ ಅವಕಾಶಗಳು ಕಣ್ನ್ ಬೆರೆಸಿದ್ದರೆ ಕರಗುತಿದ್ದ ಮನಸುಗಳು ಕ್ಷಣ ಕ್ಷಣವೂ ನನ್ನನ್ನು ಗಟ್ಟಿಗೊಳಿಸಿ ಬಿಟ್ಟಿವೆ ಬೀದಿ ಬದಿಯ ವ್ಯಾಪಾರದ ಸರಕಿಗಿಂತ ಸಲೀಸಾಗಿ ಸಿಗುತ್ತಿರುವ ಪ್ರೇಮ ಸಾಮಿಪ್ಯವು ಕೂಡ ನಿನ್ನಂತೆ ಸಪ್ಪೆ ಅನಿಸುತ್ತಿದೆ ಎಂದು ಬರೆದುಕೊಳ್ಳುವಷ್ಟು  ಸ್ಪುರದ್ರೂಪಿ ನಾನಲ್ಲ.  ನನ್ನದು ಸಾಮಾನ್ಯ ಹೆಸರು, ಸಾದಾರಣ ರೂಪು, ಸರಳ ಜೀವನ, ತೀರ ಸಪ್ಪೆ ಅನಿಸುವ ಭಾವನೆ, ಸಹನೆ ಎಂದು ಕರೆಸಿಕೊಳ್ಳುವ ಸೋಮಾರಿತನ ಅನ್ನುವುದೆಲ್ಲ ಎಷ್ಟು ಸತ್ಯವೋ,  ಇವ್ಯಾವುಗಳಿಗು ನಿನ್ನ ಬರ ಸೆಳೆಯುವ ತಾಕತ್ತಿಲ್ಲ ಅನ್ನುವುದು ಅಷ್ಟೇ ಸತ್ಯ. ಆದರೆ ಈ ಚಿಕ್ಕ ಜೀವನಾವದಿಯಲ್ಲಿ ನಿನ್ನೊಂದಿಗೆ ಸಾಗಬೇಕಾದ ಪ್ರಯಾಣ ಸುದೀರ್ಘವಾಗಿದೆ ಗೆಳತಿ. ಇದುವರೆಗೆ ನಡೆದ ಹಾದಿಯಲೆಲ್ಲು ತೆರೆದ ಬಾಗಿಲ ಮುಂದೆ ನಿಂತವನಲ್ಲ ಮುಚ್ಚಿದ ಬಾಗಿಲ ತಟ್ಟಿಯೂ ಇಲ್ಲ. ಹಾಗಂದ ಮಾತ್ರಕ್ಕೆ  ಅಮಾಯಕತೆಯು ನನಗಿಲ್ಲ,  ಮಾಡಿದ ಅಡಿಗೆಯ ರುಚಿ ತಿಳಿಯಲು ತಿನ್ನಲೆಬೇಕೆಂದೆನಿಲ್ಲವಲ್ಲ  ಬಳಸಿದ ಪದಾರ್ಥ, ಬೆರೆಸಿದ ಪ್ರಮಾಣ, ಬೇಯಿಸಿದ ಪರಿ ಇವಿಷ್ಟೇ ಸಾಕು ಸಾಮಾನ್ಯ ಜ್ಞಾನಕ್ಕೆ.
ಆಕಸ್ಮಿಕವಾಗಿ ಈ ಬರಹವದು  ನಿಮ್ಮ  ಮುಟ್ಟಿದ್ದರೆ, ಅನವಶ್ಯಕವಾಗಿ  ನಿಮ್ಮ  ಮನವ ತಟ್ಟಿದ್ದರೆ, ಅಪ್ರಯೋಜಕ ಹುಚ್ಚುತನದೊಳಗೆ ನಿಮ್ಮ  ಹಿಡಿದಿಟ್ಟಿದ್ದರೆ,  ಅದಕ್ಕಾಗಿ  ಕ್ಷಮೆ ಇರಲಿ

                                              ಅನಿವಾರ್ಯವಲ್ಲದ ಕ್ಷಮೆಗೆ  ಅರ್ಹನಾದವನು

No comments:

Post a Comment